ಬಿಸಿಜಿ ಲಸಿಕೆ 	
ಕ್ಯಾಲ್‍ಮೆಟ್ ಮತ್ತು ಗ್ವೆರಿನ್ ಎಂಬ ಫ್ರೆಂಚ್ ಏಕಾಣು ವಿಜ್ಞಾನಿಗಳಿಂದ ಪ್ರತ್ಯೇಕಿಸಲ್ಪಟ್ಟು ಮಾನವನಲ್ಲಿ ತೀವ್ರರೋಗ ಉಂಟುಮಾಡಬಲ್ಲ ಆದರೆ ಹಾಗೆ ಮಾಡದಂತೆ ಸಾಮಥ್ರ್ಯ ಕುಂದಿಸಿದ (ಅಟ್ಟೆನುಯೇಟೆಡ್) ಪಶುಕ್ಷಯಾಣುಗಳಿರುವ ಲಸಿಕೆ. ಬ್ಯಾಸಿಲ್ಲಸ್ (ಏಕಾಣುಜೀವಿ)-ಕ್ಯಾಮೆಟ್-ಗುಯರಿನ್ ವ್ಯಾಕ್ಸಿನ್ ಎನ್ನುವುದರ ಸಂಕ್ಷಿಪ್ತ ರೂಪವೇ ಬಿಸಿಜಿ. ವ್ಯಕ್ತಿಯಲ್ಲಿ ಕ್ಷಯರೋಗ ಪ್ರತಿರೋಧನ ಉಂಟು ಮಾಡಲು ಇದನ್ನು ಬಳಸುವುದುಂಟು. ಬಿಸಿಜಿ ಲಸಿಕೆ ಕೊಡುವುದರಿಂದ ದೇಹದ ಸಾಮಾನ್ಯ ಪ್ರತಿರೋಧ ಕೂಡ ವೃದ್ಧಿಯಾಗುವುದು ತಿಳಿದಿದೆ. ಆದ್ದರಿಂದ ಏಡಿಗಂತಿ ಪ್ರಾರಂಭಿಕ ಹಂತದಲ್ಲಿ ಪತ್ತೆ ಆದಾಗ ಬಿಸಿಜಿ ಲಸಿಕೆ ಚುಚ್ಚಿ ಚಿಕಿತ್ಸೆ ಕೊಡುವುದುಂಟು. ಚರ್ಮದಲ್ಲಿ ಉದ್ಭವಿಸುವ, ಸಾಮಾನ್ಯವಾಗಿ ಕರಿಬಣ್ಣಕ್ಕಿದ್ದು ಬಲು ಚಿಕ್ಕದಾಗಿರುವ ಆದರೆ ಕ್ರಮೇಣ ದೇಹಾದ್ಯಂತ ಹಬ್ಬಿ ಮಾರಕವಾಗುವ ಮೆಲನೋಮ ಎಂಬ ಏಡಿಗಂತಿಯೊಳಕ್ಕೆ ನೇರವಾಗಿ ಬಿಸಿಜಿ ಲಸಿಕೆ ಚುಚ್ಚಿದರೆ ಗಂತಿನಾಶವಾಗುವುದು ತಿಳಿದಿದೆ. ಕೆಲವು ಸಂದರ್ಭಗಳಲ್ಲಿ ಬಿಸಿಜಿಯನ್ನು ಕುಷ್ಠರೋಗ ಚಿಕಿತ್ಸಕವಾಗಿ ಬಳಸುವುದೂ ಉಂಟು. 

ಕ್ಷಯಾಣುಗಳ ಸೋಂಕಿಗೆ ಸುಲಭವಾಗಿ ಈಡಾಗಬಹುದಾದ ಕ್ಷಯಾಸ್ಪತ್ರೆಯ ವೈದ್ಯರಿಗೂ ದಾದಿಯರಿಗೂ ಚುಚ್ಚುಮದ್ದಾಗಿ ಬಿಸಿಜಿ ಲಸಿಕೆ ಕೊಡುವುದರಿಂದ ಐವರಲ್ಲಿ ನಾಲ್ವರು ಪೂರ್ಣರಕ್ಷಣೆ ಪಡೆಯುತ್ತಾರೆಂದು ಹೇಳಲಾಗಿದೆ. ಉಳಿದ ಒಬ್ಬ ಕ್ಷಯರೋಗಕ್ಕೆ ಈಡಾದರೂ ರೋಗ ಸೌಮ್ಯರೂಪದಲ್ಲಿದ್ದು ಸುಲಭ ಚಿಕಿತ್ಸೆಗೆ ಒಳಪಡುತ್ತದೆ. ಯಾವುದೇ ಜಿಲ್ಲೆಯಲ್ಲಿ ಕ್ಷಯರೋಗದ ಹಾವಳಿ ಅತ್ಯಧಿಕವಾಗಿದ್ದು ಅಲ್ಲಿ ಮಕ್ಕಳಿಗೆ ಬಿಸಿಜಿ ಲಸಿಕೆ ಕೊಡುವುದರಿಂದ ಆ ಮಕ್ಕಳು ಮಿಲಿಯರಿ ಎಂಬ ಘೋರ ರೂಪಕ ಕ್ಷಯಕ್ಕಾಗಲಿ ಮಾರಕ ಮಿದುಳುಪೊರೆ ಕ್ಷಯಕ್ಕಾಗಲಿ ತುತ್ತಾಗುವ ಸಂಭವ ಬಲುಮಟ್ಟಿಗೆ ಕಡಿಮೆ ಆಗುತ್ತದೆ ಎಂದು ತಿಳಿದಿದೆ. ಆದರೂ ಬಿಸಿಜಿ ಲಸಿಕೆಯಿಂದ ರಕ್ಷಣೆ ಒದಗಿಸುವುದರ ಬಗ್ಗೆ ಪ್ರಪಂಚಾದ್ಯಂತ ಸಾರ್ವತ್ರಿಕ ಮನ್ನಣೆ ದೊರೆತಿಲ್ಲ. ಕ್ಷಯರೋಗದ ಪ್ರತಿಬಂಧಕವಾಗಿ ಭಾರತದಲ್ಲಿ ಎಲ್ಲ ನವಜಾತ ಶಿಶುಗಳಿಗೆ ಬಿಸಿಜಿ ಲಸಿಕೆಯನ್ನು ಕೊಡಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಚುಚ್ಚಿದ ಸ್ಥಳದಲ್ಲಿ ವ್ರಣ ತಲೆದೋರಿ ಹಲವು ವರ್ಷ ಮಾಯದೆ ಇರಬಹುದು. ಆದರೆ ಲಸಿಕೆ ಒದಗಿಸುವ ರಕ್ಷಣೆಯ ಪ್ರಮಾಣಕ್ಕೆ ಹೋಲಿಸಿದಾಗ ಲಸಿಕೆಯಿಂದಲೇ ವ್ಯಾಪಕ ರೋಗ ಪಡೆಯುವವರ ಸಂಖ್ಯೆ ಮತ್ತು ವ್ರಣದಿಂದ ನರಳುವವರ ಸಂಖ್ಯೆ ತೀರ ಅಗಣನೀಯ ಎಂಬ ವಾದವೂ ಉಂಟು.

ವ್ಯಕ್ತಿ ಕ್ಷಯರೋಗಕ್ಕೆ ಈಡಾಗಬಹುದಾದ ಸಂಭವವನ್ನು ಟ್ಯುಬಕ್ರ್ಯುಲಿನ್ ಪರೀಕ್ಷೆ ಎಂಬ ವಿಧಾನದಿಂದ ಕಂಡುಕೊಳ್ಳುವುದು ರೂಢಿ. ಬಿಸಿಜಿ ಲಸಿಕೆ ಚುಚ್ಚಿದ ಬಳಿಕ ಆ ವ್ಯಕ್ತಿ ಟ್ಯುಬಕ್ರ್ಯುಲಿನ್ ಪರೀಕ್ಷೆಯಲ್ಲಿ ಸ್ವಷ್ಟ ಸೂಚನೆಗೆ (ಪಾಸಿಟಿವ್) ಅವಕಾಶವೇ ಇಲ್ಲದೆ ಯಾವಾಗಲೂ ಅದು ನಕಾರಾತ್ಮಕವಾಗಿಯೇ (ನೆಗೆಟಿವ್) ಇರುತ್ತದೆ. ಕ್ಷ್ಷಯದ ಹಾವಳಿ ಅಷ್ಟಾಗಿ ಇಲ್ಲದ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ಕ್ಷಯ ರೋಗಕ್ಕೆ ಈಡಾಗಬಹುದಾದ ಸಂಭವವನ್ನು ಕಂಡುಕೊಳ್ಳುವ ಬಲುಮುಖ್ಯ ವಿಧಾನ ಬಿಸಿಜಿ ಲಸಿಕೆಯ ಪ್ರಯೋಗದಿಂದ ಕೈ ತಪ್ಪುವುದಾಗಿ ಇದಕ್ಕೆ ಮನ್ನಣೆ ನೀಡಬಾರದು ಎಂಬ ವಾದವಿದೆ. ಈ ವಾದ ಪುರಸ್ಕರಿಸಿ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಬಿಸಿಜಿ ಬಳಕೆ ಕೈಬಿಡಲಾಗಿದೆ. ಅಲ್ಲದೆ ಐಸೋನಿಯಾಸಿಡ್ ಎಂಬ ಔಷಧದ ಬಳಕೆಯಿಂದ ಕ್ಷಯರೋಗ ಬಾರದಂತೆ ತಡೆಗಟ್ಟಬಹುದಾದ್ದರಿಂದ ಈ ಉದ್ದೇಶಕ್ಕಾಗಿ ವಾದಗ್ರಸ್ತವಾದ ಜಿಸಿಜಿಯನ್ನು ಏಕೆ ಬಳಸಬೇಕು ಎಂಬ ಪ್ರಶ್ನೆ ಏಳುತ್ತದೆ. ಆದರೂ ವಿಶಿಷ್ಟ ಸಂದರ್ಭಗಳಲ್ಲಿ ಬಿಸಿಜಿ ಲಸಿಕೆಯ ಪ್ರಯೋಜನ ಖಚಿತ ಎನ್ನಿಸಿದೆ. ಒಂದು ಪ್ರಾಂತ್ಯದ ಮಾಧ್ಯಮಿಕ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ 20 ವ್ಯಕ್ತಿಗಳು ಟ್ಯುಬಕ್ರ್ಯುಲಿನ್ ಪಾಸಿಟಿವ್ ಆಗಿದ್ದರೆ ಆ ಪ್ರಾಂತ್ಯದ ನಕಾರಾತ್ಮಕ (ನೆಗೆಟಿವ್) ವಿಧ್ಯಾರ್ಥಿಗಳಿಗೆ ಲಸಿಕೆ ಕೊಡುವುದರಿಂದ ಖಂಡಿತ ರಕ್ಷಣೆ ಒದಗಿಸಬಹುದು. ಪಾಸಿಟಿವ್ ಆಗಿರುವ ವ್ಯಕ್ತಿಗಳಿಗೆ ಬಿಸಿಜಿ ಲಸಿಕೆಕೊಡುವುದರಿಂದ ಏನೂ ಪ್ರಯೋಜನವಿಲ್ಲ. ಬದಲು ಇಂಥವರೆಗೆ ಬಿಸಿಜಿ ಲಸಿಕೆ ಕೊಟ್ಟರೆ ವ್ಯಾಪಕ ಕ್ಷಯ ರೋಗ ಇಲ್ಲವೆ ಸ್ಥಳೀಯ ವ್ರಣ ಕಾಣಬರುವ ಸಂಭವ ಗಣನೀಯವಾಗಿಯೇ ಇರುತ್ತದೆ. ಕ್ಷಯರೋಗದಿಂದ ನರಳುತ್ತಿರುವ ಸ್ತ್ರೀಯ ನವಜಾತ ಶಿಶುಗಳಿಗೆ ಬಿಸಿಜಿ ಲಸಿಕೆಯ ರಕ್ಷಣೆ ಕೊಡಬಹುದು. ಆದರೆ ಸುಮಾರು ಆರುವಾರದ ಮಗುವನ್ನು ತಾಯಿಯಿಂದ ದೂರವಾಗಿ ಇಟ್ಟಿರಬೇಕಾದ ಅಗತ್ಯ ಕಷ್ಟದ್ದು ಎಂಬುದು ವಿದಿತ. 	  
 (ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ